1 [a]ಭೂಮಿಯ ಮೇಲಿರುವ [b]ನಮ್ಮ ಈ ದೇಹವೆಂಬ ಗುಡಾರವು ಅಳಿದುಹೊದರೂ, ದೇವರಿಂದ ನಿರ್ಮಿತವಾಗಿರುವ ಒಂದು ಕಟ್ಟಡವು ಪರಲೋಕದಲ್ಲಿ ನಮಗುಂಟೆಂದು ಬಲ್ಲೆವು; [c]ಅದು ಮನುಷ್ಯನ ಕೈಗಳಿಂದ ಕಟ್ಟಿರುವ ಮನೆಯಲ್ಲ ಬದಲಾಗಿ ಶಾಶ್ವತವಾದ ಮನೆಯಾಗಿದೆ. 2 ನಾವು ಈ ದೇಹದಲ್ಲಿರುವವರೆಗೆ ನರಳುತ್ತಾ; [d]ಪರಲೋಕದಿಂದ ದೊರಕುವ ನಮ್ಮ ನಿವಾಸವನ್ನು ದೇಹದ ಮೇಲೆ ನಾವು ಎಂದು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ. 3 ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು. 4 ಏಕೆಂದರೆ, ಈ ದೇಹವೆಂಬ ಗುಡಾರದಲ್ಲಿರುವವರಾದ ನಾವು ಭಾರಹೊತ್ತುಕೊಂಡವರಾಗಿ ನರಳುತ್ತೇವೆ; ಈ ದೇಹವು ಕಳಚಿಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ; ಬದಲಾಗಿ ಅದರ ಮೇಲೆ ಧರಿಸಿಕೊಳ್ಳಬೇಕೆಂಬುದೇ. ಆದ್ದರಿಂದ [e]ನಶ್ವರವಾದದ್ದು ಅಳಿದುಹೋಗಿ ಅಮರವಾದದ್ದು ಉಳಿಯುವಂತೆ ಅಪೇಕ್ಷಿಸುತ್ತೇವೆ. 5 ಆ ಸ್ಥಿತಿಗಾಗಿ ನಮ್ಮನ್ನು ಸಿದ್ಧಗೊಳಿಸಿರುವಾತನು ದೇವರೇ; ಅದಕ್ಕಾಗಿ [f]ಆತನು ಪವಿತ್ರಾತ್ಮನನ್ನು ನಮಗೆ ಸಂಚಕಾರವಾಗಿ ನೀಡಿದ್ದಾನೆ. 6 ಹೀಗಿರುವುದರಿಂದ ನಾವು ಯಾವಾಗಲೂ ನಂಬಿಕೆಯುಳ್ಳವರಾಗಿರಬೇಕು; [g]ದೇಹದಲ್ಲಿ ವಾಸಿಸುವವರೆಗೂ ಕರ್ತನಿಂದ ದೂರದಲ್ಲಿರುವ ಪ್ರವಾಸಿಗಳಾಗಿದ್ದೇವೆ 7 [h]ನಾವು ನೋಡುತ್ತಾ ನಡೆಯದೇ, [i]ನಂಬುವವರಾಗಿಯೇ ನಡೆಯುತ್ತೇವೆ. 8 ಇದನ್ನು ಕುರಿತು ಆಲೋಚಿಸಿ ನಾವು ಧೈರ್ಯವುಳ್ಳವರಾಗಿದ್ದು [j]ದೇಹವನ್ನು ಬಿಟ್ಟು ಕರ್ತನ ಬಳಿಯಲ್ಲಿ ಇರುವುದೇ ಉತ್ತಮವೆಂದು ಎಣಿಸುವವರಾಗಿದ್ದೇವೆ. 9 ಆದ್ದರಿಂದ ನಾವು ದೇಹವೆಂಬ ಮನೆಯಲ್ಲಿದ್ದರೂ ಸರಿಯೇ ಅಥವಾ ಅದನ್ನು ಬಿಟ್ಟಿದ್ದರೂ ಸರಿಯೇ, ಕರ್ತನನ್ನು ಮೆಚ್ಚಿಸುವವರಾಗಿರಬೇಕೆಂಬುದೇ ನಮ್ಮ ಗುರಿಯಾಗಿದೆ. 10 [k]ಯಾಕೆಂದರೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡೆಸಿದ ಒಳ್ಳೆಯ ಅಥವಾ ಕೆಟ್ಟ ಕಾರ್ಯಕ್ಕೆ ತಕ್ಕ ಪ್ರತಿಫಲವನ್ನು ಹೊಂದುವುದಕ್ಕೋಸ್ಕರ [l]ಕ್ರಿಸ್ತನ ನ್ಯಾಯಾಸನದ ಮುಂದೆ ಯಥಾಸ್ಥಿತಿಯಲ್ಲಿ ಕಾಣಿಸಿಕೊಳ್ಳಬೇಕಾಗಿದೆ.
11 ಆದ್ದರಿಂದ, ಕರ್ತನಲ್ಲಿ ಭಯವುಳ್ಳವರಾಗಿರಬೇಕೆಂದು ನಾವು, ಮನುಷ್ಯರನ್ನು ಒಡಂಬಡಿಸುತ್ತೇವೆ. ನಾವು ಎಂಥವರೆಂದು ದೇವರಿಗೆ ಪ್ರಕಟವಾಗಿದ್ದೇವೆ. ಅದು [m]ನಿಮ್ಮ ಮನಸ್ಸಾಕ್ಷಿಗೆ ಕೂಡಾ ಗೊತ್ತಾಗಿದೆ ಎಂದು ನಂಬಿಕೊಂಡಿದ್ದೇನೆ. 12 [n]ನಾವು ನಮ್ಮನ್ನು ಮತ್ತೆ, ಮತ್ತೆ ನಿಮ್ಮೆದುರು ಹೊಗಳಿಕೊಳ್ಳುವುದಿಲ್ಲ; ಅಂತರಂಗವನ್ನು ಅರಿಯದೆ ಅವನ ಹೊರ ತೋರಿಕೆಯನ್ನೇ ನೆಚ್ಚಿ ನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ. 13 [o]ನಮಗೆ ಬುದ್ಧಿಭ್ರಮಣೆಯಾಗಿದ್ದರೆ ಅದು ದೇವರ ಮಹಿಮೆಗಾಗಿಯೇ; ಹಾಗೂ ನಮಗೆ ಸ್ವಸ್ಥಬುದ್ಧಿ ಇದ್ದರೆ ಅದು ನಿಮ್ಮ ಪ್ರಯೋಜನಕ್ಕಾಗಿಯೇ. 14 ಯಾಕೆಂದರೆ ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಪಡಿಸುತ್ತದೆ; [p]ಎಲ್ಲರಿಗೋಸ್ಕರ ಒಬ್ಬನು ಸತ್ತಮೇಲೆ ಎಲ್ಲರೂ ಸತ್ತಂತಾಯಿತೆಂದು ನಿಶ್ಚಯಿಸಿಕೊಂಡಿದ್ದೇವೆ. 15 ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದಾಗಿ [q]ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೇ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕು. 16 ಹೀಗಿರಲಾಗಿ [r]ಇಂದಿನಿಂದ ನಾವು ಯಾರನ್ನೂ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಮ್ಮೆ ಕ್ರಿಸ್ತನನ್ನು ನಾವು ಹೀಗೇ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಆ ರೀತಿಯಾಗಿ ಪರಿಗಣಿಸುವುದಿಲ್ಲ. 17 ಆದ್ದರಿಂದ [s]ಯಾವನಾದರೂ ಕ್ರಿಸ್ತನಲ್ಲಿದ್ದರೆ [t]ಅವನು ನೂತನ ಸೃಷ್ಟಿಯಾಗಿದ್ದಾನೆ. [u]ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು. 18 ಇವೆಲ್ಲವುಗಳು ದೇವರಿಂದಲೇ ಉಂಟಾದದ್ದು. [v]ದೇವರು ಕ್ರಿಸ್ತನ ಮೂಲಕ ನಮ್ಮನ್ನು ತನಗೆ ಸಂಧಾನಪಡಿಸಿಕೊಂಡು, ಸಂಧಾನಮಾಡುವ ಸೇವೆಯನ್ನು ನಮಗೆ ಅನುಗ್ರಹಿಸಿದ್ದಾನೆ; 19 ಹೇಗೆಂದರೆ, ಕ್ರಿಸ್ತನಲ್ಲಿ ದೇವರು ಜಗತ್ತನ್ನು ತನ್ನೊಡನೆ ಸಂಧಾನಮಾಡಿಕೊಳ್ಳುತ್ತಿದ್ದಾನೆ; ಮನುಷ್ಯರ ಅಪರಾಧಗಳನ್ನು [w]ಅವರ ಲೆಕ್ಕಕ್ಕೆ ಹಾಕದೇ, ಈ ಸಂಧಾನದ ಸಂದೇಶವನ್ನು ಎಲ್ಲರಿಗೂ ಸಾರುವಂತೆ ಅದನ್ನು ನಮ್ಮ ಮೇಲೆ ಹೊರಿಸಿದ್ದಾನೆ.
20 [x]ಆದ್ದರಿಂದ ನಾವು ಕ್ರಿಸ್ತನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾನೆ. ದೇವರೊಡನೆ ನೀವು ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತೇವೆ. 21 ಪಾಪವನ್ನೇ ಅರಿಯದ ಕ್ರಿಸ್ತ ಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತ ಯೇಸುವಿನಲ್ಲಿ ನಾವು ನೀತಿವಂತರಾಗಬೇಕೆಂದು ದೇವರು ಹೀಗೆ ಮಾಡಿದರು.
<- 2 ಕೊರಿಂಥದವರಿಗೆ 42 ಕೊರಿಂಥದವರಿಗೆ 6 ->-
a 5:1 2 ಕೊರಿ 4:7
b 5:1 2 ಪೇತ್ರ 1:13-14
c 5:1 ಮಾರ್ಕ 14:58
d 5:2 1 ಕೊರಿ 15:53-54
e 5:4 1 ಕೊರಿ 15:54
f 5:5 ರೋಮಾ. 8:23; 2 ಕೊರಿ 1:22
g 5:6 ಇಬ್ರಿ. 11:13,14
h 5:7 1 ಕೊರಿ 13:12
i 5:7 ಯೋಹಾ 20:29; 2 ಕೊರಿ 4:18
j 5:8 ಫಿಲಿ. 1:23
k 5:10 ತೀತ. 62:12
l 5:10 ಮತ್ತಾ 25:31-32; ರೋಮಾ. 14:10; ಅ. ಕೃ. 10:42
m 5:11 2 ಕೊರಿ 4:2
n 5:12 2 ಕೊರಿ 3:1
o 5:13 2 ಕೊರಿ 11:1,16,7; 12:6,11; ಅ. ಕೃ. 26:24,25
p 5:14 ರೋಮಾ. 5:15
q 5:15 ರೋಮಾ. 6:11,12; 14:7
r 5:16 ಗಲಾ. 2:6; ಫಿಲಿ. 3:7,8; ಕೊಲೊ 2:11
s 5:17 2 ಕೊರಿ 12:2; ಗಲಾ. 1:22
t 5:17 ಯೋಹಾ 3:3; ರೋಮಾ. 6:4; ಗಲಾ. 6:15
u 5:17 ಯೆಶಾ 43:18,19; ಪ್ರಕ 21:5; ಎಫೆ 2:15; 4:24
v 5:18 ಕೊಲೊ 1:20; ರೋಮಾ. 5:10
w 5:19 ಕೀರ್ತ 32:2; ರೋಮಾ. 4:8; 1 ಕೊರಿ 13:5
x 5:20 ಎಫೆ 6:20