1 ಯೆಹೋವನು ನನಗೆ, “ನೀನು ಹೋಗಿ ನಾರಿನ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ, ನೀರಿನಲ್ಲಿ ನೆನಸಿಡಬೇಡ” ಎಂದು ಅಪ್ಪಣೆಕೊಟ್ಟನು. 2 ಆಗ ನಾನು ಯೆಹೋವನ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆನು. 3 ಆ ಮೇಲೆ ಯೆಹೋವನ ಮಾತು ಎರಡನೆಯ ಬಾರಿ ನನಗೆ ಕೇಳಿ ಬಂತು. 4 ಅವನು ನನಗೆ, “ನೀನು ಕೊಂಡುಕೊಂಡು ಸೊಂಟಕ್ಕೆ ಬಿಗಿದ ನಡುಕಟ್ಟನ್ನು ತೆಗೆದುಕೊಂಡು ಹೊರಟು ಯೂಫ್ರೆಟಿಸ್ ನದಿಗೆ ಹೋಗಿ, ಅದನ್ನು ಅಲ್ಲಿ ಬಂಡೆಯ ಸಂದಿನೊಳಗೆ ಬಚ್ಚಿಡು” ಎಂಬುದಾಗಿ ನುಡಿದನು. 5 ಆಗ ಯೆಹೋವನ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಿಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆನು. 6 ಬಹು ದಿನಗಳ ಮೇಲೆ ಯೆಹೋವನು ನನಗೆ, “ಹೊರಡು, ಯೂಫ್ರೆಟಿಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ” ಎಂದು ಹೇಳಿದನು. 7 ನಾನು ಯೂಫ್ರೆಟಿಸ್ ನದಿಗೆ ಹೋಗಿ ಅಗೆದು, ನಾನು ಬಚ್ಚಿಟ್ಟ ಸ್ಥಳದೊಳಗಿಂದ ನಡುಕಟ್ಟನ್ನು ತೆಗೆದೆನು, ಆಹಾ, ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು. 8 ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 9 “ಇದು ಯೆಹೋವನಾದ ನನ್ನ ನುಡಿ, ಈ ನಡುಕಟ್ಟಿನಂತೆ ನಾನು ಯೆಹೂದದ ದೊಡ್ಡಸ್ತಿಕೆಯನ್ನೂ ಮತ್ತು ಯೆರೂಸಲೇಮಿನ ಬಲು ದೊಡ್ಡಸ್ತಿಕೆಯನ್ನೂ ಕೆಡಿಸಿಬಿಡುವೆನು. 10 ನನ್ನ ಮಾತುಗಳನ್ನು ಕೇಳದೆ ತಮ್ಮ ಹೃದಯದ ಹಟದಂತೆ ನಡೆದು, ಅನ್ಯದೇವತೆಗಳನ್ನು ಹಿಂಬಾಲಿಸಿ, ಸೇವಿಸಿ ಪೂಜಿಸುತ್ತಿರುವ ಈ ದುಷ್ಟ ಜನರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಮಾನವಾಗಿರುವರು. 11 ಸಮಸ್ತ ಇಸ್ರಾಯೇಲ್ ವಂಶವೂ ಮತ್ತು ಸಕಲ ಯೆಹೂದ ವಂಶವೂ ನನ್ನ ಪ್ರಜೆಯಾಗಿದ್ದು ನನಗೆ ಹೆಸರೂ, ಸ್ತೋತ್ರವೂ, ಮಹಿಮೆಯೂ ಆಗಿರಲೆಂದು ನಡುಕಟ್ಟನ್ನು ಸೊಂಟಕ್ಕೆ ಬಿಗಿದಿರುವಂತೆ ಇವರನ್ನು ಬಿಗಿದುಕೊಂಡಿದ್ದೇನೆ; ಆದರೂ ಇವರು ಕೇಳದೆ ಹೋದರು ಎಂದು ಯೆಹೋವನು ನುಡಿಯುತ್ತಾನೆ” ಎಂಬುದೇ.
ಗಡಿಗೆಗಳ ಸಾಮ್ಯ
12 “ಹೀಗಿರಲು ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು” ಎಂಬುದಾಗಿ ಇಸ್ರಾಯೇಲರ ದೇವರಾದ ಯೆಹೋವನು ಹೇಳುವ ಮಾತನ್ನು ಕೇಳಿರಿ ಎಂದು ನೀನು ಅವರಿಗೆ ಸಾರು; ಆಗ ಅವರು ನಿನಗೆ, “ಪ್ರತಿಯೊಂದು ಗಡಿಗೆಯು ದ್ರಾಕ್ಷಾರಸದಿಂದ ತುಂಬಿರುವುದು ನಮಗೆ ಗೊತ್ತಿಲ್ಲವೋ” ಎಂದು ಹೇಳುವರು. 13 ಆಗ ನೀನು ಅವರಿಗೆ, “ಯೆಹೋವನ ಈ ಮಾತನ್ನು ಕೇಳಿರಿ, ದಾವೀದನ ಸಿಂಹಾಸನವನ್ನೇರಿದ ಅರಸರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ, ಯೆರೂಸಲೇಮಿನ ಸಕಲ ನಿವಾಸಿಗಳನ್ನೂ ಅಂತು ದೇಶದ ಜನರೆಲ್ಲರನ್ನೂ, 14 ನಾನು ಅಮಲಿನಿಂದ ತುಂಬಿಸಿ ಹಿರಿಕಿರಿಯರಾದ ಸಮಸ್ತರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ನಾನು ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ನಾಶಮಾಡದೆ ಬಿಡೆನು” ಇದು ಯೆಹೋವನ ನುಡಿ.