1 ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು. 2 ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು [a]ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ, 3 “ನಾವು ನಮ್ಮ ದೇವರ ದಾಸರಿಗೆ [b]ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ನಾಶಮಾಡಬೇಡಿರಿ” ಎಂದು ಮಹಾಶಬ್ದದಿಂದ ಕೂಗಿ ಹೇಳಿದನು. 4 ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು [c]ನಾನು ಕೇಳಿಸಿಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ. 5 ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ, 6 ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ, 7 ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ, 8 ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.
9 ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ [d]ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. [e]ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು [f]ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ [g]ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು. 10 ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ [h]ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು. 11 ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು [i]ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ [j]ಅಡ್ಡಬಿದ್ದು, 12 [k]“ಆಮೆನ್! [l]ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!” ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
13 ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, [m]“ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು. 14 ಅವನು ನನಗೆ, “ಇವರು [n]ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ [o]ರಕ್ತದಲ್ಲಿ [p]ತಮ್ಮ ನಿಲುವಂಗಿಗಳನ್ನು ತೊಳೆದು [q]ಶುಭ್ರಮಾಡಿಕೊಂಡಿದ್ದಾರೆ. 15 ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ [r]ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ [s]ಬಿಡಾರವಾಗಿರುವನು. 16 ಇನ್ನೆಂದಿಗೂ [t]ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, [u]ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ. 17 ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು [v]ಅವರಿಗೆ ಕುರುಬನಂತಿದ್ದು [w]ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. [x]ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.
<- ಪ್ರಕಟಣೆ 6ಪ್ರಕಟಣೆ 8 ->-
a 7:2 ಪೂರ್ವದಿಕ್ಕಿನಿಂದ
b 7:3 ಯೆಹೆ. 9:4; ಪ್ರಕ 14:1; 22:4; ಪ್ರಕ 13 16:
c 7:4 ಪ್ರಕ 9:16:
d 7:9 ರೋಮಾ. 11:25:
e 7:9 ಪ್ರಕ 5:9:
f 7:9 ವ. 14. ಪ್ರಕ 3:4:
g 7:9 ಯಾಜ 23:40; ಯೋಹಾ 12:13:
h 7:10 ಅಥವಾ. ಯಜ್ಞದ ಕುರಿಯಾದಾತನಿಗೂ ಜಯವಾಗಲಿ; ಕೀರ್ತ 3:8; ಪ್ರಕ 12:10; 19:1:
i 7:11 ಪ್ರಕ 4:6:
j 7:11 ಪ್ರಕ 4:10:
k 7:12 ಅಂದರೆ, ತಥಾಸ್ತು, ಹಾಗೆಯೇ ಆಗಲಿ; ಪ್ರಕ 5:14; 19:4:
l 7:12 1ಪೂರ್ವ 29:10, 11:
m 7:13 ವ. 14; ಪ್ರಕ 3:4:
n 7:14 ಮತ್ತಾ 24:21, 29; ದಾನಿ. 12:1:
o 7:14 ಪ್ರಕ 1:5
p 7:14 ಪ್ರಕ 22:14; ಯೆಶಾ 1:18; ಜೆಕ. 3:3-5:
q 7:14 ದಾನಿ. 12:10; ಅ. ಕೃ. 15:9; 1 ಯೋಹಾ 1:7:
r 7:15 ಪ್ರಕ 22:3:
s 7:15 ಪ್ರಕ 21:3; ಯೆಶಾ 4, 5, 6; ಯೆಹೆ. 37:27; ಯೋಹಾ 1:14:
t 7:16 ಯೆಶಾ 49:10:
u 7:16 ಕೀರ್ತ 121:6:
v 7:17 ಕೀರ್ತ 23:1, 2; ಯೆಶಾ 40. 11; ಯೆಹೆ. 34:12, 23; 37:24; ಜೆಕ. 13:7; ಮತ್ತಾ 2:6; ಯೋಹಾ 10:11; ಇಬ್ರಿ. 13:20; 1 ಪೇತ್ರ. 2:25; 5:4:
w 7:17 ಪ್ರಕ 22:1; ಕೀರ್ತ 36:8, 9; ಯೋಹಾ 4:14:
x 7:17 ಪ್ರಕ 21:4; ಯೆಶಾ 25:8: