1 [a]ಆತನು [b]ಏಳನೆಯ ಮುದ್ರೆಯನ್ನು ಒಡೆದಾಗ ಸುಮಾರು ಅರ್ಧಗಂಟೆ ಕಾಲ ಪರಲೋಕದಲ್ಲಿ ನಿಶ್ಯಬ್ದವಾಯಿತು. 2 ಆಗ [c]ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ದೇವದೂತರನ್ನು ಕಂಡೆನು. ಅವರಿಗೆ ಏಳು ತುತ್ತೂರಿಗಳು ಕೊಡಲ್ಪಟ್ಟವು.
3 ಅನಂತರ ಮತ್ತೊಬ್ಬ ದೇವದೂತನು ಬಂದನು, ಅವನು [d]ಚಿನ್ನದ ಧೂಪಾರತಿ ಹಿಡಿದುಕೊಂಡು ಯಜ್ಞವೇದಿಯ ಬಳಿಯಲ್ಲಿ ನಿಂತನು. ಸಿಂಹಾಸನದ ಮುಂದಣ ಚಿನ್ನದ ಧೂಪವೇದಿಯ ಮೇಲೆ [e]ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳೊಂದಿಗೆ ಸಮರ್ಪಿಸುವುದಕ್ಕಾಗಿ ಅವನಿಗೆ ಬಹಳ ಧೂಪವು ಕೊಡಲ್ಪಟ್ಟಿತು. 4 ಆಗ ಧೂಪದ ಹೊಗೆಯು ದೇವದೂತನ ಕೈಯಿಂದ ಹೊರಟು [f]ದೇವಜನರ ಪ್ರಾರ್ಥನೆಗಳೊಂದಿಗೆ ಸೇರಿ ದೇವರ ಸನ್ನಿಧಿಗೆ ಏರಿಹೋಯಿತು. 5 ತರುವಾಯ ಆ ದೇವದೂತನು ಧೂಪಾರತಿಯನ್ನು ತೆಗೆದುಕೊಂಡು [g]ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಯ ಮೇಲೆ ಎಸೆದನು. ಆಗ ಗರ್ಜಿಸುವ [h]ಗುಡುಗು, ಮಹಾಶಬ್ದಗಳು, ಮಿಂಚು, ಭೂಕಂಪವು ಉಂಟಾದವು.
6 ಏಳು ತುತ್ತೂರಿಗಳನ್ನು ಹಿಡಿದಿರುವ ಏಳು ಮಂದಿ ದೇವದೂತರು ತುತ್ತೂರಿಗಳನ್ನು ಊದಲು ಸಿದ್ಧರಾದರು.
7 ಮೊದಲನೆಯ ದೇವದೂತನು ತನ್ನ ತುತ್ತೂರಿಯನ್ನೂದಲು [i]ರಕ್ತ ಮಿಶ್ರಿತವಾದ [j]ಆಲಿಕಲ್ಲಿನ ಮಳೆಯೂ ಬೆಂಕಿಯೂ ಭೂಮಿಯ ಮೇಲೆ ಸುರಿಯಿತು. ಭೂಮಿಯ [k]ಮೂರರಲ್ಲಿ ಒಂದು ಭಾಗವು ಸುಟ್ಟು ಹೋಯಿತು. [l]ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು. ಹಸಿರು ಹುಲ್ಲೆಲ್ಲಾ ಸುಟ್ಟು ಹೋಯಿತು.
8 ಎರಡನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಬೆಂಕಿಯಿಂದ ಉರಿಯುತ್ತಿರುವ [m]ದೊಡ್ಡ ಬೆಟ್ಟವೋ ಎಂಬಂತಿರುವ ವಸ್ತುವನ್ನು ಸಮುದ್ರಕ್ಕೆ ಎಸೆಯಲಾಯಿತು. ಆಗ ಸಮುದ್ರದೊಳಗೆ ಮೂರರಲ್ಲಿ ಒಂದು ಭಾಗ [n]ರಕ್ತವಾಯಿತು. 9 [o]ಸಮುದ್ರದ ಜೀವಿಗಳಲ್ಲಿ ಮೂರರಲ್ಲಿ ಒಂದು ಭಾಗವು ಸತ್ತವು ಮತ್ತು [p]ಹಡಗುಗಳಲ್ಲಿ ಮೂರರಲ್ಲಿ ಒಂದು ಭಾಗವು ನಾಶವಾದವು.
10 ಮೂರನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು. ಆಗ ಪಂಜಿನಂತೆ ಉರಿಯುವ [q]ಒಂದು ದೊಡ್ಡ ನಕ್ಷತ್ರವು ಆಕಾಶದಿಂದ ನದಿಗಳ ಹಾಗೂ [r]ನೀರಿನ ಬುಗ್ಗೆಗಳ ಮೂರರಲ್ಲಿ ಒಂದು ಭಾಗದ ಮೇಲೆ ಬಿದ್ದಿತು. 11 ಆ ನಕ್ಷತ್ರದ ಹೆಸರು [s]ಮಾಚಿಪತ್ರೆ. ನೀರಿನ ಮೂರರಲ್ಲಿ ಒಂದು ಭಾಗ [t]ಮಾಚಿಪತ್ರೆಯಂತೆ ವಿಷವಾಯಿತು ಮತ್ತು ಆ [u]ನೀರು ಕಹಿಯಾದ್ದರಿಂದ ಅನೇಕರು ಸತ್ತುಹೋದರು.
12 ನಾಲ್ಕನೆಯ ದೇವದೂತನು ತನ್ನ ತುತ್ತೂರಿಯನ್ನು ಊದಿದನು, ಆಗ ಸೂರ್ಯನ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ [v]ಕತ್ತಲಾಯಿತು. ಅದೇ ಪ್ರಕಾರ ಚಂದ್ರನಲ್ಲಿ ಮತ್ತು ನಕ್ಷತ್ರಗಳಲ್ಲಿ ಮೂರರಲ್ಲಿ ಒಂದು ಭಾಗಕ್ಕೆ ತೊಂದರೆಯುಂಟಾಗಿ ಕತ್ತಲಾಗಿ ಹೋಯಿತು. ಇದರಿಂದ ಹಗಲಿನಲ್ಲಿ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಕತ್ತಲಾಗಿ, ರಾತ್ರಿಯ ಹಾಗೆಯೇ ಆಯಿತು.
13 ಆ ಮೇಲೆ ನಾನು ನೋಡಲಾಗಿ ಇಗೋ ಒಂದು ಹದ್ದು ಆಕಾಶದ ಮಧ್ಯದಲ್ಲಿ ಹಾರಾಡುತ್ತಿತ್ತು, ಅದರ ಕೂಗು ನನಗೆ ಕೇಳಿಸಿತು. ಅದು, “ಇನ್ನು ಉಳಿದ ಮೂವರು ದೇವದೂತರು ತುತ್ತೂರಿಯನ್ನು ಊದುವಾಗ ಭೂನಿವಾಸಿಗಳಿಗೆ [w]ಕೇಡು, ಕೇಡು, ಕೇಡು” ಎಂದು ಮಹಾಶಬ್ದದಿಂದ ಕೂಗುವುದನ್ನು ಕೇಳಿಸಿಕೊಂಡೆನು.
<- ಪ್ರಕಟಣೆ 7ಪ್ರಕಟಣೆ 9 ->-
a 8:1 ಯಜ್ಞದ ಕುರಿಮರಿ ಅಥವಾ ಯೇಸುಕ್ರಿಸ್ತನು.
b 8:1 ಪ್ರಕ 5:1; 6:1:
c 8:2 ಲೂಕ 1:19:
d 8:3 ವಿಮೋ 30. 1, 3; ಪ್ರಕ 9:13:
e 8:3 ಪ್ರಕ 5:8:
f 8:4 ಕೀರ್ತ 141:2:
g 8:5 ಯಾಜ 16:12:
h 8:5 ಪ್ರಕ 4:5:
i 8:7 ಯೋವೇ. 2:30.
j 8:7 ವಿಮೋ 9:23, 24; ಕೀರ್ತ 18:12, 13; ಯೆರೆ 38:22:
k 8:7 ಪ್ರಕ 8:8-12; 9:15, 18; 12:4; ಯೆರೆ 5:2; ಜೆಕ. 13:8, 9:
l 8:7 ಯೆಶಾ 2:13; ಪ್ರಕ 9:4:
m 8:8 ಯೆರೆ 51:25; ಮಾರ್ಕ 11:23:
n 8:8 ಪ್ರಕ 11:6; ವಿಮೋ 7:17, 19
o 8:9 ಪ್ರಕ 16:3; ವಿಮೋ 7:20, 21:
p 8:9 ಯೆಶಾ 2:16:
q 8:10 ಪ್ರಕ 9:1; ಯೆಶಾ 14:12:
r 8:10 ಪ್ರಕ 14:7; 16:4:
s 8:11 ಕಹಿಯಾದ ಒಂದು ಜಾತಿಯ ಸಸ್ಯ. ಔಷಧಗಳ ತಯಾರಿಕೆಗೆ ಬಳಸುವ ಸಸಿ ಅಥವಾ ಗಿಡ.
t 8:11 ಧರ್ಮೋ 29:18; ಯೆರೆ 9:15; 3:15:
u 8:11 ವಿಮೋ 15:23:
v 8:12 ವಿಮೋ 10:21-23; ಯೆಶಾ 13:10; 30. 26; ಪ್ರಕ 8:10:
w 8:13 ಪ್ರಕ 9:12; 11:14: