ನೀವೇ ಬಲ್ಲೆ; ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯ ಮಾತು ಹೊರಟಿತು.
17 ನೀವು ನನ್ನನ್ನು ಭಯಪಡಿಸಬೇಡಿ.
ಕೇಡಿನ ದಿನದಲ್ಲಿ ನೀವೇ ನನ್ನ ಆಶ್ರಯವಾಗಿದ್ದೀರಿ.
18 ನನ್ನನ್ನು ಹಿಂಸಿಸುವವರು ನಾಚಿಕೆಗೆ ಗುರಿಯಾಗಲಿ;
ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲು ಪಡಲಿ;
ಆದರೆ ನಾನು ದಿಗಿಲು ಪಡದಿರಲಿ.
ಆದರೆ ನಾನು ದಿಗಿಲು ಪಡದಂತೆ ಮಾಡುವ
ಕೆಟ್ಟದಿನವನ್ನು ಅವರ ಮೇಲೆ ಬರಮಾಡಿ.
ಎರಡರಷ್ಟಾದ ನಾಶದಿಂದ ಅವರನ್ನು ನಾಶಪಡಿಸಿ.
ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು
19 ಯೆಹೋವ ದೇವರು ನನಗೆ, “ಹೋಗಿ, ಯೆಹೂದದ ಅರಸರು ಪ್ರವೇಶಿಸುವ, ಹೊರಡುವ ಜನರ ಬಾಗಿಲಲ್ಲಿಯೂ, ಯೆರೂಸಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು, 20 ಅವರಿಗೆ ಹೀಗೆ ಹೇಳು: ‘ಯೆಹೂದದ ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ. 21 ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಮಗೆ ನೀವೇ ಎಚ್ಚರಿಕೆಯಾಗಿರಿ. ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತೆಗೆದುಕೊಂಡು ಬರಬೇಡಿರಿ. 22 ಸಬ್ಬತ್ ದಿನದಲ್ಲಿ ಹೊರೆಯನ್ನು ನಿಮ್ಮ ಮನೆಗಳಿಂದ ತೆಗೆದುಕೊಂಡು ಹೋಗಬೇಡಿರಿ. ಯಾವ ಕೆಲಸವನ್ನೂ ಮಾಡಬೇಡಿರಿ. ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ ಪ್ರಕಾರವೇ, ಸಬ್ಬತ್ ದಿನವನ್ನು ಪರಿಶುದ್ಧವಾಗಿಡಬೇಕು. 23 ಆದರೆ ಅವರು ವಿಧೇಯರಾಗಲಿಲ್ಲ, ಕಿವಿಗೊಟ್ಟು ಕೇಳಲಿಲ್ಲ. ಆದರೆ ವಿಧೇಯರಾಗದ ಹಾಗೆಯೂ, ಉಪದೇಶ ಹೊಂದದ ಹಾಗೆಯೂ ಹಟಮಾರಿಯಾಗಿದ್ದರು. 24 ಯೆಹೋವ ದೇವರಾದ ನನ್ನ ನುಡಿ ಇದೇ: ನೀವು ನನ್ನನ್ನು ಜಾಗ್ರತೆಯಿಂದ ಕೇಳಿ, ಸಬ್ಬತ್ ದಿನದಲ್ಲಿ, ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತೆಗೆದುಕೊಂಡು ಬಾರದೆ, ಸಬ್ಬತ್ ದಿನದಲ್ಲಿ ಯಾವುದೊಂದು ಕೆಲಸಮಾಡದೆ ಪರಿಶುದ್ಧಮಾಡಿದರೆ, 25 ದಾವೀದನ ಸಿಂಹಾಸನದ ಮೇಲೆ ಕೂರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ, ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು, ಯೆಹೂದದ ಮನುಷ್ಯರಾಗಿಯೂ, ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು, ಅವರೂ, ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು. ಈ ಪಟ್ಟಣದಲ್ಲಿ ಎಂದೆಂದಿಗೂ ವಾಸಮಾಡಿದರು. 26 ಇದಲ್ಲದೆ ಯೆಹೂದದ ಪಟ್ಟಣಗಳಿಂದಲೂ, ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ, ಬೆನ್ಯಾಮೀನನ ದೇಶದಿಂದಲೂ, ಬಯಲಿನಿಂದಲೂ, ಬೆಟ್ಟಗಳಿಂದಲೂ, ದಕ್ಷಿಣದಿಂದಲೂ ದಹನಬಲಿಗಳನ್ನೂ, ಬಲಿಗಳನ್ನೂ, ಧಾನ್ಯ ಸಮರ್ಪಣೆಗಳನ್ನೂ, ಧೂಪವನ್ನೂ ತರುವರು. ಸ್ತೋತ್ರದ ಅರ್ಪಣೆಗಳನ್ನು ಯೆಹೋವ ದೇವರ ಆಲಯಕ್ಕೆ ತರುವರು. 27 ಆದರೆ ನೀವು ಸಬ್ಬತ್[a] ದಿನವನ್ನು ಪರಿಶುದ್ಧಮಾಡದೆ, ಸಬ್ಬತ್ ದಿನದಲ್ಲಿ ಹೊರೆಯನ್ನು ಹೊತ್ತುಕೊಂಡು, ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಿದರೆ ಯೆರೂಸಲೇಮಿನ ದ್ವಾರಗಳಲ್ಲಿ ಬೆಂಕಿಯನ್ನು ಹಚ್ಚುವೆನು. ಅದು ಆರಿಹೋಗದೆ, ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.’ ”